ಕಾರವಾರ : ಧರ್ಮ-ದೈವ ನಿಷ್ಟರಲ್ಲದವರ ಮೇಲೆ ಕಾಲಚಕ್ರ ಸದಾ ತಿರುಗಿದರೆ ಧರ್ಮ, ದೇವರು, ಗುರು ನಿಷ್ಠರ ತಲೆಯ ಮೇಲೆ ಸದಾ ಕರುಣಾಚಕ್ರ ತಿರುಗುತ್ತಿರುತ್ತದೆ, ಎಲ್ಲೆಡೆ ಧರ್ಮದ ಗಾಳಿ ಬೀಸಬೇಕಿದೆ ಎಂದು ರಾಮಚಂದ್ರಾಪುರಮಠಾಧೀಶ ರಾಘವೇಶ್ವರ ಮಹಾಸ್ವಾಮೀಜಿ ಹೇಳಿದರು.
ಉತ್ತರ ಕನ್ನಡ ಜಿಲ್ಲೆಯ ಕುಮಟಾತಾಲೂಕಿನ ಹೊಳೆಗದ್ದೆಯಲ್ಲಿ ಶ್ರೀ ಶಾಂತಿಕಾ ಪರಮೇಶ್ವರಿ ದೇವಸ್ಥಾನದ ಆವಾರದಲ್ಲಿ ಇಂದುನೂತನ ನಿರ್ಮಿತ ಸಭಾಭವನ ಲೋಕಾರ್ಪಣೆಗೊಳಿಸಿದರು. ತಲೆಯ ಮೇಲೆ ತಾಯಿಯ ಕರುಣಾ ಚಕ್ರ ಇರಬೇಕೇ ಹೊರತು ಯಮನ ಕಾಲಚಕ್ರ ಇರಬಾರದು. ಸತ್ಯನಿಷ್ಠೆಗಳು ಬದುಕಿಗೆ ಮಾರ್ಗದರ್ಶಿಯಾಗುತ್ತವೆ.
ಮಹಿಳೆಯರು ಸಂತೋಷದಿಂದಿದ್ದರೆ ಮನೆ ಉದ್ಧಾರವಾಗುತ್ತದೆ ಎಂದು ಶಾಸ್ತ್ರ ಹೇಳುತ್ತದೆ ಎಂದು ಪೂಜ್ಯರು ಹೇಳಿದರು. ಮಹಿಳೆಯರಿಗೆ ಸಲ್ಲಬೇಕಾದ ಗೌರವ ಸಲ್ಲಬೇಕು. ಗೃಹಿಣಿಯರಿಗೂ ತಾವು ಪೂಜ್ಯರೆಂಬುದು ಮನಸಿಗೆ ಬರಬೇಕು. ಪತಿತರೆಂದು ಭಾವಿಸಿದರೆ ಮಹಾಪಾಪವಾಗುತ್ತದೆ. ನಮ್ಮ ಮನಸ್ಸುಗಳು ನನ್ನ ಹೆಂಡತಿ-ಮಕ್ಕಳು ಮಾತ್ರ ಎಂಬಷ್ಟು ಚಿಕ್ಕದಾಗಿದೆ. ಇದೆ ವೇಳೆ ದೇವಸ್ಥಾನ ಸಮಿತಿಯಿಂದ ಗುರುಭಿಕ್ಷಾ ಸೇವೆ ಜರುಗಿತು. ಕಾರ್ಯಕ್ರಮದಲ್ಲಿ ಶಾಸಕ ದಿನಕರ ಶೆಟ್ಟಿ ಪಾಲ್ಗೊಂಡು ಶ್ರೀಗಳಿಂದ ಆಶೀರ್ವಾದ ಮಂತ್ರಾಕ್ಷತೆ ಸ್ವೀಕರಿಸಿದರು. ಸಭಾಭವನ ಸಮಿತಿ ಪದಾಧಿಕಾರಿಗಳು, ಸದಸ್ಯರು, ಯುವ ಸೇವಾ ಸಮಿತಿ, ಕುಳಾವಿ ಭಜಕರು, ಭಕ್ತಾದಿಗಳು ಉಪಸ್ಥಿತರಿದ್ದರು.