ಕಾರವಾರ:ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮಹಾಸತಿ ಸಭಾಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮಹಾಸತಿ ಸಭಾಭವನದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜ್ಞಾನ ವಿಕಾಸ ಕಾರ್ಯಕ್ರಮದಡಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಮಹಿಳಾ ವಿಚಾರ ಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೌಟುಂಬಿಕ ಜೀವನದಲ್ಲಿ ಸಂಸ್ಕೃತಿ, ಸಂಸ್ಕಾರ ಉಳಿಸುವಿಕೆಯಲ್ಲಿ ಮಹಿಳೆಯರ ಪಾತ್ರ ಕುರಿತು ವಿಶೇಷ ಉಪನ್ಯಾಸ ಮಾಡಿದರು.
ತಾಯಿ ಕುಟುಂಬದ ಶಕ್ತಿ, ಕುಟುಂಬ ಸಮಾಜದ ತಾಯಿ ಬೇರು. ಕುಟುಂಬದಲ್ಲಿ ನಡೆದದ್ದೇ ದೇಶದಲ್ಲಿ ಪ್ರತಿಬಿಂಬಿತವಾಗುತ್ತದೆ. ಧರ್ಮನಿಷ್ಟೆ, ಉತ್ತಮ ಆಚರಣೆ, ಸಂಸ್ಕೃತಿಯ ಪಾಠ ಪೀಳಿಗೆಯಿಂದ ಪೀಳಿಗೆಗೆ ಹರಿದುಬರಬೇಕು ಎಂದು ಸಂಸ್ಕೃತ ಅಧ್ಯಾಪಕಿ ಶ್ರೀದೇವಿ ಹೆಗಡೆ ಊರಕೇರಿ ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿದ ಜೆಡಿಎಸ್ ಸೂರಜ ನಾಯ್ಕ ಮಾತನಾಡಿ, ಮಹಿಳೆಯರು ಮುಂದೆ ಬರಬೇಕಾದರೆ ಶಿಸ್ತಿನ ಜತೆಗೆ ಧನಾತ್ಮಕ ಮನಸ್ಥಿತಿ ಬೇಕು. ಅಂಥ ಶಿಸ್ತು ಮನಸ್ಥಿತಿ, ಹುಮ್ಮಸ್ಸು ತುಂಬುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಹಿಳೆಯರ ಯಶಸ್ಸಿಗೆ ಕಾರಣವಾಗುತ್ತಿದೆ. ಜ್ಞಾನ ವಿಕಾಸ ಕಾರ್ಯಕ್ರಮದ ಮೂಲಕ ಶಿಕ್ಷಣ, ಸ್ವ ಉದ್ಯೋಗ, ಆರೋಗ್ಯ, ಸಂಸ್ಕಾರ ಎಲ್ಲವನ್ನೂ ನೀಡುತ್ತಿದ್ದಾರೆ. ಭಾರತೀಯ ಮಾತೆಯ ನೈಜ ಸ್ವರೂಪ, ಗುಣ ಮೌಲ್ಯಗಳ ಪುನಃ ಸಂವರ್ಧನೆಗಾಗಿಯೇ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಅಮ್ಮನವರು ಇಂಥ ಕಾರ್ಯಕ್ರಮಗಳ ಮೂಲಕ ಮಹಿಳೆಯರನ್ನು ಸಶಕ್ತಗೊಳಿಸುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಕೀಲೆ ಮಮತಾ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಮಹೇಶ ಎಂ.ಡಿ., ಪೊಲೀಸ್ ಅಧಿಕಾರಿ ರೂಪಾ, ಯೋಜನಾಧಿಕಾರಿ ಕಲ್ಮೇಶ ಎಂ. ಇತರರು ಇದ್ದರು. ಕಾರ್ಯಕ್ರಮದಲ್ಲಿ ಪುಷ್ಪಗುಚ್ಛಸ್ಪರ್ಧೆ ನಡೆಯಿತು. ಯೋಜನೆಯಡಿ ಸ್ವಸಹಾಯ ಸಂಘದ ಸದಸ್ಯ ಮಹಿಳೆಯರು ಸಿದ್ಧಪಡಿಸಿದ ವೈವಿಧ್ಯಮಯ ಸ್ವ ಉದ್ಯೋಗದ ಸಾಮಗ್ರಿಗಳ ಮಳಿಗೆಗಳಿಗೂ ಚಾಲನೆ ನೀಡಲಾಯಿತು. ನಂತರ ಮಹಿಳೆಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆಯಿತು. ಜ್ಞಾನ ವಿಕಾಸ ಸಮನ್ವಯಾಧಿಕಾರಿ ವೀಣಾ ದಿನೇಶ ಸಂಗಡಿಗರು ಕಾರ್ಯಕ್ರಮ ನಿರ್ವಹಿಸಿದರು.