ಕಾರವಾರ : ಉತ್ತರ ಕನ್ನಡ ಜಿಲ್ಲೆ ಅಖಂಡವಾಗಿರಬೇಕೆಂಬುದು ಒಂದಷ್ಟು ಜನರ ಆಶಯವಾಗಿದೆ. ತಪ್ಪಿಲ್ಲ, ಹಾಗಿದ್ದರೆ ಬಹುತೇಕರಿಗೆ ದೂರವಾಗಿರುವ ಜಿಲ್ಲಾಕೇಂದ್ರ ಕಾರವಾರದ ಬದಲು ಶಿರಸಿಯನ್ನು ಮಾಡಲು ಸಾಧ್ಯವಿದೆಯಾ ? ಜಿಲ್ಲೆ ಅಖಂಡವಾಗಿರಬೇಕು ಎಂದು ನಮ್ಮ ವಿರುದ್ಧ ಮಾತನಾಡಿದವರಿಗೆ ಜಿಲ್ಲಾ ಮಧ್ಯಭಾಗವಾಗಿರುವ ಶಿರಸಿಗೆ ಜಿಲ್ಲಾ ಕೇಂದ್ರ ತರುವ ತಾಕತ್ತಿದೆಯಾ ? ಇಲ್ಲ ತಾನೇ, ಹಾಗಾಗಿಯೇ ಪ್ರತ್ಯೇಕ ಜಿಲ್ಲಾ ಹೋರಾಟವನ್ನು ಕೈಗೆತ್ತಿಕೊಳ್ಳಲಾಗಿದೆ.
ಅದೇ ರೀತಿ ಕದಂಬರು ಆಳಿದ, ಪಂಪ ಹಾಡಿರುವ ಬನವಾಸಿ ಕ್ಷೇತ್ರ ತಾಲೂಕು ಪ್ರದೇಶವಾಗಲಿ ಎಂದು ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ಅವರು ಶುಕ್ರವಾರ ಬನವಾಸಿಯಲ್ಲಿ ಕದಂಬ ಜಿಲ್ಲೆ ಮತ್ತು ಬನವಾಸಿ ತಾಲೂಕು ರಚನೆಗಾಗಿ ಆಗ್ರಹಿಸಿ ನಡೆದ ಪ್ರತಿಭಟನಾ ಮೆರವಣಿಗೆಯ ನೇತೃತ್ವ ವಹಿಸಿ ಮಾತನಾಡಿದರು. ಜಿಲ್ಲಾಕೇಂದ್ರ ಕಾರವಾರ ಘಟ್ಟದ ಮೇಲಿನ ಎಲ್ಲ ತಾಲೂಕಿನವರಿಗೆ ದೂರವಾಗಿದೆ.
ಬಡ ರೈತರಿಗೆ ಜಿಲ್ಲಾ ಕೇಂದ್ರ ಕಾರವಾರಕ್ಕೆ ಹೋಗಿ ಬರುವುದೆಂದರೆ ಕಷ್ಟಕರವಾಗಿದೆ.
ಅದೇ ರೀತಿ ಪ್ರತ್ಯೇಕ ಜಿಲ್ಲಾ ಹೋರಾಟಕ್ಕೆ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಬೆಂಬಲ ಸೂಚಿಸಿದ್ದಾರೆ. ಅದೇ ರೀತಿ ಶಾಸಕ ಭೀಮಣ್ಣನವರೂ ಸಹ ಸಹಕಾರ ನೀಡುವುದರ ಜೊತೆಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿಸುವ ಮಾತನ್ನು ಪೊಲೀಸ್ ಹೇಳಿದ್ದಾರೆ.
ಮಾಜಿ ಸಚಿವ ಆರ್.ವಿ.ದೇಶಪಾಂಡೆಯವರೂ ಸಹ ಪ್ರತ್ಯೇಕ ಜಿಲ್ಲೆಯಾದರೆ ನಮ್ಮದೇನೂ ಅಭ್ಯಂತರವಿಲ್ಲ ಎಂದಿದ್ದಾರೆ. ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಶಿರಸಿಯನ್ನು ಶೈಕ್ಷಣಿಕ ಜಿಲ್ಲೆಯನ್ನಾಗಿಸುವ ಮೂಲಕ ಪ್ರತ್ಯೇಕ ಜಿಲ್ಲೆ ಹೋರಾಟಕ್ಕೆ ಅಡಿಪಾಯವನ್ನು ಹಾಕಿಕೊಟ್ಟಿದ್ದಾರೆ.
ನಮಗೆ ಯಾರ ಬಗ್ಗೆಯೂ ವಯಕ್ತಿಕವಾಗಿ ವಿರೋಧ ಮಾಡಲು, ಟೀಕೆ ಮಾಡಲು ಇಷ್ಟವಿಲ್ಲ. ಪ್ರತ್ಯೇಕ ಜಿಲ್ಲೆಯಾಗುವುದರಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ, ಮೆಡಿಕಲ್ ಕಾಲೇಜು ದೊರೆಯುತ್ತದೆ. ಈ ವಿಷ್ಯದಲ್ಲಿ ತಮಾಷೆ ಮಾಡುವುದು ಸರಿಯಲ್ಲ. ಪ್ರಚಾರದ ಹಂಬಲಿಗಾಗಿ ಸಖಾಸುಮ್ಮನೆ ಹೇಳಿಕೆ ಕೊಡುವುದು ಶೋಭೆಯಲ್ಲ ಎಂದರು.