ಪುಸ್ತಕ, ಪೆನ್ನು, ಲ್ಯಾಪ್ ಟಾಪ್, ಮೊಬೈಲ್ ಫೋನನ್ನು ಪಕ್ಕಕ್ಕಿಟ್ಟು ಆಹಾರ ಮೇಳದಲ್ಲಿ ಭಾಗವಹಿಸಿ ವಿವಿಧ ಕೌಂಟರ್ ಗಳನ್ನು ತೆರೆದು ತರಕಾರಿಗಳು, ಹಣ್ಣು ಹಂಪಲುಗಳು ಹಾಗೂ ಸೊಪ್ಪು ಪಲ್ಲೆಗಳನ್ನು ಕತ್ತರಿಸಿ ಪೈಪೋಟಿ ಮೇಲೆ ವ್ಯಾಪಾರ ಮಾಡಿ ಸೈ ಎನಿಸಿಕೊಂಡು, ಶಿಕ್ಷಣದ ಜೊತೆಗೆ ಲೋಕಜ್ಞಾನವೂ ಅಗತ್ಯ ಎಂದು ಸಾಧಿಸಿ ತೋರಿಸಿದ ಎಂಜಿನಿಯರಿಂಗ್ ವಿದ್ಯಾರ್ಥಿಗಳು.
ಕೃಷ್ಣರಾಜಪೇಟೆ ಪಟ್ಟಣದ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸಡಗರ ಸಂಭ್ರಮ ಹಾಗೂ ಉತ್ಸಾಹದಿಂದ ನಡೆದ ಆಹಾರ ಮೇಲಕ್ಕೆ ಪ್ರಾಂಶುಪಾಲ ಡಾ.ಕೆ.ಆರ್.ದಿನೇಶ್ ಚಾಲನೆ ನೀಡಿದರು.
ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದ ಜೊತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಲೋಕಜ್ಞಾನದ ಬಗ್ಗೆ ಅರಿವಿನ ಜಾಗೃತಿಯನ್ನು ಪಡೆದುಕೊಳ್ಳಲು ಆಹಾರ ಮೇಳವು ಪರಿಣಾಮ ಕಾರಿಯಾಗಿದ್ದು ವರದಾನವಾಗಿದೆ.
ಆಹಾರ ಪದ್ದತಿಯು ನಮ್ಮ ಜೀವನದ ಕ್ರಮವಾಗಿರುವುದರಿಂದ ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಆಹಾರ ಕ್ರಮವನ್ನು ಅರಿತು ಸಮಗ್ರವಾಗಿ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಾಧನೆ ಮಾಡಲು ಸಹಕಾರಿಯಾಗಿದೆ ಎಂದು ತಿಳಿಸಿದ ಪ್ರಾಂಶುಪಾಲ ದಿನೇಶ್ ನಮ್ಮ ಕಾಲೇಜಿನ ಸಿವಿಲ್, ಮೆಕ್ಯಾನಿಕಲ್, ಕಂಪ್ಯೂಟರ್ ಸೈನ್ಸ್ ಹಾಗೂ ಎಲೆಕ್ಟ್ರಾನಿಕ್ಸ್ ಸೇರಿದಂತೆ ನಾಲ್ಕು ವಿಭಾಗಗಳ ಮುಖ್ಯಸ್ಥರು ಹಾಗೂ ವಿದ್ಯಾರ್ಥಿಗಳು ಉತ್ಸಾಹದಿಂದ ಆಹಾರ ಮೇಳದಲ್ಲಿ ಭಾಗವಹಿಸಿ ರುಚಿ ಹಾಗೂ ಶುಚಿಗೆ ಒತ್ತು ನೀಡಿ ಪೈಪೋಟಿಯ ಮೇಲೆ ವ್ಯಾಪಾರ ಮಾಡಿ ವ್ಯವಹಾರ ಜಾಣ್ಮೆಯನ್ನು ತಮ್ಮ ಜೀವನದಲ್ಲಿ ರೂಢಿಸಿ ಕೊಳ್ಳುತ್ತಿದ್ದಾರೆ ಎಂದು ದಿನೇಶ್ ಹೇಳಿದರು.
ಆಹಾರ ಮೇಳದ ಸಂಚಾಲಕ ಅಧ್ಯಾಪಕ ಡಿಂಕಾಮಹೇಶ್ ಮಾತನಾಡಿ ವಿದ್ಯಾರ್ಥಿಗಳು ನಮ್ಮ ದೇಸಿ ನೆಲದ ಆಹಾರ ಪದಾರ್ಥಗಳನ್ನು ತಯಾರಿಸುವ ಜೊತೆಗೆ ಉತ್ತರ ಕರ್ನಾಟಕದ ರೊಟ್ಟಿ, ಕಾಯಿ ಪಲ್ಲೆಗಳು, ಬಜ್ಜಿ ಸೇರಿದಂತೆ ವಿವಿಧ ಬಗೆಯ ತಿನಿಸುಗಳನ್ನು ತಯಾರಿಸಿ ಮಾರಾಟ ಮಾಡಿ ಭರ್ಜರಿಯಾಗಿ ವ್ಯಾಪಾರ ಮಾಡಿ ಆಹಾರ ಮೇಳದಲ್ಲಿಯೂ ಸೈ ಎನಿಸಿಕೊಂಡಿದ್ದಾರೆ ಎಂದು ಹೇಳಿದರು.
ಆಹಾರ ಮೇಳದಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರುಗಳಾದ . ಡಾ.ಬಿ.ಎಂ.ರುದ್ರೇಶ್, ಡಾ.ನಾಗಪ್ಪ ಭಜಂತ್ರಿ, ಡಾ.ಪ್ರಶಾಂತ್, ಪ್ರೊ.ನಂದೀಶ್, ಪತ್ರಕರ್ತರು, ವಿದ್ಯಾರ್ಥಿಗಳ ಪೋಷಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿದ್ದರು.
ವರದಿ.ಡಾ.ಕೆ.ಆರ್.ನೀಲಕಂಠ , ಕೃಷ್ಣರಾಜಪೇಟೆ , ಮಂಡ್ಯ.