ಕಾಂಗ್ರೆಸ್ಸಿನ ಈ.ತುಕಾರಾಂ ರಾಜೀನಾಮೆಯಿಂದ ತೆರವಾದ ಸಂಡೂರು ವಿಧಾಸನಭಾ ಕ್ಷೇತ್ರದ ಉಪಚುನಾವಣೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಎನ್‌ಡಿಎ ಮೈತ್ರಿ ಮತ್ತು ಕಾಂಗ್ರೆಸ್ ಭರ್ಜರಿ ತಯಾರಿ ನಡೆಸುತ್ತಿವೆ. ಕಾಂಗ್ರೆಸ್ ಭದ್ರಕೋಟೆ ಸಂಡೂರಲ್ಲಿ ಈ ಬಾರಿ ಕಮಲ ಅರಳಿಸಲು ಬಿಜೆಪಿ ನಾಯಕರು ರಣತಂತ್ರ ಹೆಣೆದಿದ್ದು, ಸಂಡೂರಲ್ಲಿ ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ತಾತ್ಕಾಲಿಕವಾಗಿ ಮನೆ ಮಾಡಿದ್ದು,ಈ ನೂತನ ಮನೆಗೆ ಗೃಹ ಪ್ರವೇಶ ಮಾಡಿದ್ದಾರೆ.
ಜನಾರ್ದನ ರೆಡ್ಡಿಗೆ ಬಳ್ಳಾರಿ ಜಿಲ್ಲೆಗೆ ಪ್ರವೇಶದ ಮೇಲಿನ ನಿಷೇಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿದ್ದು, ಜಿಲ್ಲೆಯಲ್ಲಿ ರೆಡ್ಡಿ ಅವರಿಗೆ ಈಗಲೂ ವ್ಯಾಪಕ ಬೆಂಬಲವಿದೆ ಮತ್ತು ಅವರ ಜನಪ್ರಿಯತೆಯ ಮೇಲೆ ಪಕ್ಷಕ್ಕೆ ಲಾಭವಾಗುತ್ತದೆ ಎಂದು ಬಿಜೆಪಿ ಭರವಸೆಯಿರಿಸಿದೆ. ಚುನಾವಣಾ ಪ್ರಚಾರದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಸಂಡೂರಿನಲ್ಲಿ ಮನೆ ಮಾಡಿದ್ದು, ಇತ್ತೀಚಿಗಷ್ಟೇ ಗೃಹಾಪ್ರೇವೇಶವನ್ನ ಪೂರ್ಣಗೊಳಿಸಿದ್ದಾರೆ.
ಸಂಡೂರು ಉಪಚುನಾವಣೆಯಲ್ಲಿ ಗೆಲುವು ಸಾಧಿಸುವ ಮತ್ತು ಬಳ್ಳಾರಿಯಲ್ಲಿ ಬಲವಾದ ಹಿಡಿತವನ್ನು ಉಳಿಸಿಕೊಳ್ಳುವತ್ತ ಗಮನಹರಿಸಿರುವ ರೆಡ್ಡಿ ಉಪಚುನಾವಣೆ ವಿಜಯವನ್ನು ಪ್ರಧಾನಿ ನರೇಂದ್ರ ಮೋದಿಯವರಿಗೆ ಅರ್ಪಿಸುವುದಾಗಿ ಭರವಸೆ ನೀಡಿದರು.
ಆದರೆ, ಮತದಾನದ ನಂತರ ಮನೆಗೆ ಶಾಶ್ವತವಾಗಿ ಬೀಗ ಹಾಕಿ ಮುಚ್ಚಲಾಗುವುದು ಎಂದು ಕಾಂಗ್ರೆಸ್ ನಾಯಕರು ವ್ಯಂಗ್ಯವಾಡಿದ್ದಾರೆ.