ದೇವನಹಳ್ಳಿ: ಆಗಸ್ಟ್ 1 ರಂದು ಸರ್ವೋಚ್ಚ ನ್ಯಾಯಾಲಯವು ಮಾದಿಗ ಸಮುದಾಯದ ಮೂರು ದಶಕಗಳ ಬೇಡಿಕೆಯಾಗಿದ್ದ ಒಳ ಮೀಸಲಾತಿ ಜಾರಿ ಮಾಡುವಂತೆ ರಾಜ್ಯ ಸರ್ಕಾರಗಳಿಗೆ ತೀರ್ಪು ನೀಡಿದೆ ಆದರೆ ಪಕ್ಕದ ರಾಜ್ಯಗಳಲ್ಲಿ ಜಾರಿಗೆ ಬಂದಿದ್ದರೂ ನಮ್ಮ ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರ್ಕಾರ ಮೀನಾಮೇಷ ಎಣಿಸುತ್ತಿರುವುದರ ವಿರುದ್ಧ ಮಾದಿಗ ದಂಡೋರ ರಾಜ್ಯ ಮತ್ತು ನಾಲ್ಕು ತಾಲುಕಿನ ಪದಾಧಿಕಾರಿಗಳು ಜಂಟಿ ಪತ್ರಿಕಾಗೋಷ್ಠಿಯನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆಸಿದರು.
ಮಾದಿಗ ದಂಡೋರ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳಮೀಸಲಾತಿಯನ್ನು ಜಾರಿ ಮಾಡಿಯೇ ತೀರುತ್ತೇನೆ ಎಂದು ಹೇಳಿದ್ದರು ಆದರೆ ಕೆಲ ಬಲಾಢ್ಯ ನಾಯಕರು ಇದನ್ನು ಜಾರಿಗೆ ಬಾರದಂತೆ ಹುನ್ನಾರ ಹೂಡುತ್ತಿದ್ದಾರೆ ಇದನ್ನು ಖಂಡಿಸುತ್ತಾ ಕೋರ್ಟ್ ನೀಡಿದ ತೀರ್ಪನ್ನು ಯಥಾವತ್ತಾಗಿ ಜಾರಿಯಾಗಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸುತ್ತಾ ಇಚ್ಛಾಶಕ್ತಿ ಇಲ್ಲದ ಕಾರಣ ಮುಂದೂಡುತ್ತಿದ್ದಾರೆ, ಆದ್ದರಿಂದ ಇದೇ 14 ರಂದು ಕ್ಷೇತ್ರದ ಶಾಸಕರ ಮನೆ ಮುಂದೆ ತಮಟೆ ಚಳುವಳಿ ಹಾಗೂ 16 ರಂದು ಬೆಳಗಾವಿ ಅಧಿವೇಶನಕ್ಕೆ ತೆರಳಿ ಸಮಾವೇಶದ ಮೂಲಕ ಸರ್ಕಾರದ ಕಣ್ಣು ತೆರೆಸುವ ಕೆಲಸ ಮಾಡಲಿದ್ದೇವೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾದಿಗ ದಂಡೋರ ಜಿಲ್ಲಾಧ್ಯಕ್ಷ ಮಾರಪ್ಪ, ಉಸ್ತುವಾರಿಗಳಾದ ವೆಂಕಟೇಶ್ ದೊಡ್ಡೇರಿ, ಪದಾಧಿಕಾರಿಗಳಾದ ಶಿವಾನಂದ್, ಮಂಜುಸೂರಿ, ದೇವರಾಜ್, ಕದಿರಪ್ಪ, ಪ್ರಕಾಶ್, ಅಂಜನಮೂರ್ತಿ, ನಾಗರಾಜ್ ಇನ್ನು ಹಲವು ತಾಲ್ಲೂಕಿನ ಪದಾಧಿಕಾರಿಗಳು ಹಾಜರಿದ್ದರು.