Welcome to reportnowtv.in   Click to listen highlighted text! Welcome to reportnowtv.in
Saturday, December 14, 2024
HomeDistrictsTumakuruಮಗನನ್ನು ಸಾಯಿಸಲು ಅನುಮತಿ ಕೊಡಿ ಎಂದು ಪೊಲೀಸರನ್ನು ಕೇಳಿದ ತಾಯಿ..!

ಮಗನನ್ನು ಸಾಯಿಸಲು ಅನುಮತಿ ಕೊಡಿ ಎಂದು ಪೊಲೀಸರನ್ನು ಕೇಳಿದ ತಾಯಿ..!

ತುಮಕೂರು : ನನ್ನ ಮಗನ್ನ ದಯಮಾಡಿ ಜೈಲಿಗೆ ಹಾಕಿ ಇಲ್ಲಾ ನಂಗೆ ಸಾಯಿಸಲು ಪರ್ಮಿಷನ್ ಕೊಡಿ. ಡ್ರಗ್ ನಿಯಂತ್ರಣ ಮಾಡದ ಪೊಲೀಸರ ವಿರುದ್ದ ಡ್ರಗ್ ಅಡಿಟ್ ಹುಡಗನ ಹೆತ್ತ ತಾಯಿ ಮಗನನ್ನು ಸರಿದಾರಿಗೆ ತರಲು ಸಾದ್ಯವಾಗುತ್ತಿಲ್ಲ ಎಂದು ಅಸಹಾಯಕತೆಯಿಂದ ಒಡಲಾಳದ ನೋವನ್ನ ತೋಡಿಕೊಂಡಿರುವ ಘಟನೆ ತುಮಕೂರು ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ನಡೆದಿದೆ.

ಸಾರ್ ನನ್ ಮಗ ಸರಿಯಿಲ್ಲ. ಗಾಂಜಾ ಹೊಡೀತಾನೆ, ಡ್ರಗ್ಸ್ ತಗೋತಾನೆ, ಸಿಕ್ಕ ಸಿಕ್ಕವರ ಮೇಲೆ ಹೊಡೆದಾಟಕ್ಕೆ ಹೋಗ್ತಾನೆ. ಹೆಣ್ಣು ಮಕ್ಕಳ ಬಗ್ಗೆ ಲಘುವಾಗಿ ಮಾತಾಡ್ತಾನೆ. ಕೀಟಲೆ ಮಾಡ್ತಾನೆ. ಜನರ ಕೈಲಿ ಒದೆ ತಿಂತಾನೆ. ಅದನ್ನು ನಾನು ನೋಡಕ್ಕೆ ಆಗಲ್ಲ. ಕೈ ಕಾಲು ಮುರಿದು ಹಾಕ್ತಾರೆ. ಜನಗಳು ನಮ್ ಮನೆ ಮುಂದೆ ಬಂದು ಗಲಾಟೆ ಮಾಡ್ತಾರೆ. ಮರ್ಯಾದೆ ಹೋಗ್ತಾ ಇದೆ. ದಯಮಾಡಿ ನನ್ ಮಗನ್ನ ಜೈಲಿಗೆ ಹಾಕಿ. ಇಲ್ಲಾಂದ್ರೆ ನನಗೆ ಅವನನ್ನು ಸಾಯಿಸಕ್ಕೆ ಪರ್ಮಿಷನ್ ಕೊಡಿ.
ಇದು ಹೆತ್ತೊಡಲಿನ ಒಡಲಾಳದ ಮಾತು.

ಹೌದು. ನಂಬಿದರೆ ನಂಬಿ.ಬಿಟ್ಟರೆ ಬಿಡಿ. ಇದು ತುರುವೇಕೆರೆ ಪಟ್ಟಣದಲ್ಲಿ ಸಣ್ಣ ಹೋಟೆಲ್ ಇಟ್ಟುಕೊಂಡು ಜೀವನ ನಡೆಸುತ್ತಿರುವ ರೇಣುಕಮ್ಮರ ನೋವು. ತಮ್ಮ 20 ವರ್ಷ ವಯೋಮಾನದ ಮಗ ಅಭಿ ಕೆಟ್ಟ ಸ್ನೇಹಿತರ ಸಹವಾಸಕ್ಕೆ ಬಿದ್ದು ಕಲಿಯಬಾರದ ಚಟಗಳನ್ನೆಲ್ಲಾ ಕಲಿತಿದ್ದಾನೆ. ಚಟಗಳಿಂದ ಮುಕ್ತಗೊಳಿಸಲು ಸಾಕಷ್ಟು ಪ್ರಯತ್ನಪಟ್ಟಿದ್ದೇನೆ. ಆದರೂ ಪ್ರಯೋಜನವಾಗಿಲ್ಲ.

ತುರುವೇಕೆರೆ ಪಟ್ಟಣದಲ್ಲಿ ಗಾಂಜಾ ಸೇರಿದಂತೆ ಹಲವಾರು ಮಾದಕ ವಸ್ತುಗಳು ಮಾರಾಟವಾಗುತ್ತಿವೆ. ಇದು ಯುವಕರನ್ನು ಹಾಳು ಮಾಡುತ್ತಿದೆ. ನನ್ನ ಮಗನೂ ಇಂತಹ ಜಾಲಕ್ಕೆ ಬಿದ್ದು ತನ್ನ ಜೀವನವನ್ನು ಹಾಳು ಮಾಡಿಕೊಂಡಿದ್ದಾನೆ. ಹೀಗೇ ಪಟ್ಟಣದಲ್ಲಿ ಸಾಕಷ್ಟು ಯುವಕರಿದ್ದಾರೆ. ಇವರಿಗೆ ಮಾದಕ ವಸ್ತುಗಳನ್ನು ಸಪ್ಲೆ ಮಾಡುತ್ತಿರುವವರು ಯಾರು ಎಂಬುದನ್ನು ದಯಮಾಡಿ ಪತ್ತೆ ಹಚ್ಚಿ ಅಮಾಯಕರನ್ನು ಕಾಪಾಡಿ ಎಂದು ರೇಣುಕಮ್ಮ ಪೋಲಿಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಶನಿವಾರ ಮಧ್ಯಾಹ್ನ ತುರುವೇಕೆರೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಅಭಿ ಅಲ್ಲಿದ್ದ ಕೆಲವು ಬಾಲಕಿಯರನ್ನು ಚುಡಾಯಿಸಿದ್ದಾನೆ. ಅಲ್ಲದೇ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದನ್ನು ಗಮನಿಸಿದ ಅಲ್ಲೇ ಇದ್ದ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಅಭಿಯನ್ನು ಹಿಡಿದು ಚನ್ನಾಗಿ ಥಳಿಸಿ ಸ್ಥಳೀಯ ಪೋಲಿಸರ ವಶಕ್ಕೆ ಒಪ್ಪಿಸಿದ್ದಾರೆ. ಈ ನಡುವೆ ಇದೇ ಅಭಿ ಕಳೆದ ಮರ‍್ನಾಲ್ಕು ದಿನಗಳ ಹಿಂದೆ ಪಟ್ಟಣದಲ್ಲಿ ಯುವತಿಯೋರ್ವಳಿಗೆ ಜೀವ ಬೆದರಿಕೆ ಹಾಕಿದ್ದ ಹಿನ್ನೆಲೆಯಲ್ಲಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿಸಲಾಗಿತ್ತು. ಪೋಲಿಸರು ಅಭಿಯನ್ನು ಹುಡುಕುತ್ತಿದ್ದರು. ಈ ಮಧ್ಯೆ ಕಾಲೇಜಿನ ಕ್ರೀಡಾಂಗಣದಲ್ಲಿ ಮಾದಕ ವಸ್ತು ಸೇವಿಸಿದ್ದ ಅಭಿ ಕುಚೇಷ್ಠೆ ಮಾಡಿ ಜನರ ಕೈಗೆ ಸಿಕ್ಕಿ ಹಣ್ಣುಗಾಯಿ ನೀರುಗಾಯಿ ಆಗಿ ಪೋಲಿಸರ ಅತಿಥಿಯಾದ.

ಅಭಿಯ ತಾಯಿ ರೇಣುಕಮ್ಮ ತನ್ನ ಮಗ ಮಾದಕ ವಸ್ತುಗಳಿಗೆ ದಾಸನಾಗಿದ್ದಾನೆ. ಮನೆಯಲ್ಲಿ ಕೊಡಬಾರದ ಕಿರುಕುಳ ಕೊಡ್ತಾ ಇದ್ದಾನೆ. ಬೈಕ್ ಮತ್ತು ಮೊಬೈಲ್ ಬೇಕು ಅಂದ. ಕೊಡಿಸಲ್ಲ ಅಂದರೆ ಎಲ್ಲಿ ಕಳ್ಳತನ ಮಾಡ್ತಾನೋ?. ಏನು ಸಮಸ್ಯೆ ಮಾಡಿಕೊಳ್ತೋನೋ ಅಂತ ಹೆದರಿ ಸಾಲ ಮಾಡಿ ಬೈಕ್ ಮತ್ತು ಮೊಬೈಲ್ ಕೊಡಿಸಿದೆ. ಆದರೆ ಈಗ ಈ ಸಂಕಟ ತಂದಿಟ್ಟಿದ್ದಾನೆ ಎಂದು ರೇಣುಕಮ್ಮ ಅಲವತ್ತುಕೊಂಡರು.

ದಯಮಾಡಿ ನನ್ನ ಮಗನನ್ನು ಜೈಲಿಗೆ ಹಾಕಿಯಾದರೂ ಈ ದುಷ್ಚಟಗಳಿಂದ ದೂರ ಮಾಡಬೇಕು. ನನ್ನ ಮಗ ಹಾಳಾದ ರೀತಿಯಲ್ಲಿ ಇನ್ನೂ ಹಲವಾರು ಮಕ್ಕಳಿದ್ದಾರೆ. ಅವರನ್ನು ಈ ಪಾಪದ ಕೂಪದಿಂದ ಪಾರು ಮಾಡಬೇಕು ಎಂಬುದು ನನ್ನ ಆಸೆ. ಇಲ್ಲವೇ ನನ್ನ ಮಗನನ್ನು ಸಾಯಿಸಕ್ಕೆ ಪರ್ಮಿಷನ್ ಕೊಡಿ ನಾನು ಅವನನ್ನು ಸಾಯಿಸಿ ನಾನೂ ಸಾಯ್ತೀನಿ ಎಂದು ಪೋಲಿಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಪೋಲಿಸ್ ಠಾಣೆಗೆ ತೆರಳಿದ್ದ ತಾಯಿ ರೇಣುಕಮ್ಮಳಿಗೆ ಧೈರ್ಯ ತುಂಬಿದ ಸಬ್ ಇನ್ಸ್ ಪೆಕ್ಟರ್ ಪಾಂಡು, ಅಭಿ ಕೆಟ್ಟ ಸ್ನೇಹಿತರ ಸಹವಾಸದಿಂದ ಹಾಳಾಗಿದ್ದಾನೆ. ಅವನನ್ನು ಸರಿದಾರಿಗೆ ತರುವ ಪ್ರಯತ್ನಕ್ಕೆ ತಾವು ಕೈ ಜೋಡಿಸುವುದಾಗಿ ಹೇಳಿದ್ದಾರೆ. ನಿಮ್ಹಾನ್ಸ್ ನಲ್ಲಿ ಸೂಕ್ತ ಚಿಕಿತ್ಸೆ ಕೊಡಿಸಲು ತಾವು ನೆರವು ನೀಡುವುದಾಗಿ ರೇಣುಕಮ್ಮರಿಗೆ ಧೈರ್ಯ ತುಂಬಿದ್ದಾರೆ.ಸದ್ಯ ತುರುವೇಕೆರೆ ಪೋಲಿಸರು ಅಭಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಡ್ರಗ್ ಇಂದು ಇಡೀ ದೇಶದಲ್ಲಿ ಮಾರಕವಾಗಿ ಹಬ್ಬಿದೆ, ಈ ವ್ಯಸನಕ್ಕೆ ಯುವಜನತೆ, ಶಾಲಾ ಕಾಲೇಜು ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ‌.ಇದು ಸಮಾಜದ ಸ್ವಾಸ್ಥ್ಯ ವನ್ನ ಹಾಳುಮಾಡುತ್ತಿರುವುದಲ್ಲದೆ, ವ್ಯಸನಿಗಳು ಡ್ರಗ್ ಮತ್ತಿನಲ್ಲಿ ಹಲವು ಸಮಾಜಘಾತುಕ ಕೆಲಸಗಳನ್ನ ಮಾಡುತ್ತಿದ್ದಾರೆ. ಜೊತೆಗೆ ಅವರ ಪೋಷಕರು ಸಮಾಜದ ಮುಂದೆ ತಲೆ ತಗ್ಗಿಸಿ ನಿಲ್ಲುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಗೃಹ ಸಚಿವ ಡಾ.ಜಿ ಪರಮೇಶ್ವರ್ ಉಸ್ತುವಾರಿ ವಹಿಸಿರುವ ಜಿಲ್ಲೆಯಲ್ಲೆ ಇಂತಹ ಘಟನೆ ನಡೆದಿದೆ. ಪೊಲೀಸರು ಡ್ರಗ್ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಂಡು ಡ್ರಗ್ ಪೆಡ್ಲರ್ ಗಳಿಗೆ ಎಡೆಮುರಿ‌ಕಟ್ಟಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ತಾಯಿಯಂತೆ ನೂರಾರು ತಾಯಂದಿರು ತಾವು ಹೆತ್ತ ಮಕ್ಕಳನ್ನ ಸಾಯಿಸಲು ಪೊಲೀಸ್ ಠಾಣೆಗಳ ಮುಂದೆ ಅನುಮತಿಗೆ ಕ್ಯೂ ನಿಲ್ಲುವಂತ ಪರಿಸ್ಥಿತಿ ಎದುರಾಗಿದೆ.

ಸ್ಥಳ -ತುಮಕೂರು
ವರದಿ -ವಿಜಯ್ ಶಂಕರ್

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

Latest news
Click to listen highlighted text!