ಭವಿಷ್ಯದ ತಾರೆ ಎನಿಸಿರುವ ಟೀಮ್ ಇಂಡಿಯಾದ ಯುವ ಬ್ಯಾಟರ್ ಸರ್ಫರಾಝ್ ಖಾನ್ ಚೊಚ್ಚಲ ಟೆಸ್ಟ್ ಶತಕ ಬಾರಿಸಿದ್ದಾರೆ. 46ಕ್ಕೆ ಆಲ್‌ಔಟ್ ಆದ ಬಳಿಕ ಭಾರತ ತಂಡ ಮೊದಲ ಇನಿಂಗ್ಸ್‌ನಲ್ಲಿ 356 ರನ್‌ಗಳ ಭಾರಿ ಹಿನ್ನಡೆ ಅನುಭವಿಸಿ ಇನಿಂಗ್ಸ್ ಸೋಲಿನ ಸುಳಿಗೆ ಸಿಲುಕಿತ್ತು. ಈ ಸಂದರ್ಭದಲ್ಲಿ ಕೆಚ್ಚೆದೆಯ ಬ್ಯಾಟಿಂಗ್ ಪ್ರದರ್ಶನ ನೀಡಿದ ಸರ್ಫರಾಝ್ ಖಾನ್, ಪಂದ್ಯದ ನಾಲ್ಕನೇ ದಿನದಾಟದ ಮೊದಲ ಅವಧಿಯಲ್ಲಿ ಸೆಂಚುರಿ ಬಾರಿಸಿ ಸಂಭ್ರಮಿಸಿದರು.
ನ್ಯೂಜಿಲೆಂಡ್ ಬೌಲರ್‌ಗಳನ್ನು ದಂಡಿಸಿದ ಸರ್ಫರಾಝ್ ಖಾನ್, ಪಂದ್ಯದ ನಾಲ್ಕನೇ ದಿನ ಮೊದಲ ಅವಧಿಯಲ್ಲಿ ತಮ್ಮ ಇನಿಂಗ್ಸ್‌ನ 111ನೇ ಎಸೆತದಲ್ಲಿ ಶತಕ ಪೂರೈಸಿ ಡ್ರೆಸಿಂಗ್ ರೂಮ್ ಕಡೆಗೆ ಬ್ಯಾಟ್ ಬೀಸಿ ಸಂಭ್ರಮಿಸಿದರು. ಅವರ ಇನಿಂಗ್ಸ್‌ನಲ್ಲಿ 14 ಫೋರ್ ಮತ್ತು 3 ಸಿಕ್ಸರ್‌ಗಳು ಮೂಡಿಬಂದಿದ್ದವು. ಮೊದಲ ಇನಿಂಗ್ಸ್‌ನಲ್ಲಿ ಡಕ್‌ಔಟ್ ಆಗಿದ್ದ ಸರ್ಫರಾಝ್ ಖಾನ್, ಎರಡನೇ ಇನಿಂಗ್ಸ್‌ನಲ್ಲಿ ತಮ್ಮ ತಪ್ಪು ತಿದ್ದುಕೊಂಡು ಅವಿಸ್ಮರಣೀಯ ಇನಿಂಗ್ಸ್ ಆಡಿದರು.
ಇನ್ನು ಪಂದ್ಯದ ಮೂರನೇ ದಿನದಾಟದಲ್ಲಿ ವಿರಾಟ್ ಕೊಹ್ಲಿ (70) ಜೊತೆಗೂಡಿದ 26 ವರ್ಷದ ಬಲಗೈ ಬ್ಯಾಟರ್ ಸರ್ಫರಾಝ್ ಖಾನ್, 3ನೇ ವಿಕೆಟ್‌ಗೆ ಶತಕದ ಜೊತೆಯಾಟವಾಡಿದರು. ಕೊಹ್ಲಿ ಮತ್ತು ಸರ್ಫರಾಝ್ ಖಾನ್ ಜೋಡಿ ಎದುರಿಸಿದ 163 ಎಸೆತಗಳಲ್ಲಿ 136 ರನ್‌ಗಳ ಜೊತೆಯಾಟ ಕಟ್ಟಿ ಭಾರತ ತಂಡವನ್ನು ಅಪಾಯದಿಂದ ಪಾರು ಮಾಡಿತ್ತು. ದುರದೃಷ್ಟವಶಾತ್, ಮೂರನೇ ದಿನದಾಟದ ಅಂತಿಮ ಎಸೆತದಲ್ಲಿ ವಿರಾಟ್ ಕೊಹ್ಲಿ ಪಾರ್ಟ್ ಟೈಮ್ ಸ್ಪಿನ್ನರ್ ಗ್ಲೆನ್ ಫಿಲಿಪ್ಸ್‌ಗೆ ವಿಕೆಟ್ ಒಪ್ಪಿಸಿ ನಿರಾಶೆ ಅನುಭವಿಸಿದರು.
ಬಳಿಕ ನಾಲ್ಕನೇ ದಿನದಾಟದಲ್ಲಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಜೊತೆ ಸೇರಿಕೊಂಡ ಸರ್ಫರಾಝ್, ಬಿರುಸಿನ ಬ್ಯಾಟಿಂಗ್ ನಡೆಸಿ ನೋಡ ನೋಡುತ್ತಿದ್ದಂತೆಯೇ ಅರ್ಧಶತಕದ ಜೊತೆಯಾಟ ಕಟ್ಟಿದರು. ಈ ಜೊತೆಯಾಟಗಳ ಬಲದಿಂದ ಭಾರತ ತಂಡ ತಾನು ಮೊದಲ ಇನಿಂಗ್ಸ್‌ನಲ್ಲಿ ಅನುಭವಿಸಿದ್ದ 356 ರನ್‌ಗಳ ಬೃಹತ್ ಹಿನ್ನಡೆಯನ್ನು ನಿಧಾನವಾಗಿ ಕರಗಿಸುತ್ತಾ ಬಂದಿತು.