ಕೊಪ್ಪಳ ಜಿಲ್ಲೆಯ ಗಂಗಾವತಿಯ ಮರುಕುಂಬಿ ದಲಿತ ದೌರ್ಜನ್ಯ ಪ್ರಕರಣದ 98 ಆರೋಪಿಗಳಿಗೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ ಜೀವಾವಧಿ ಶಿಕ್ಷೆ ವಿಧಿಸಿದೆ. ಎಸ್‌ಸಿ ಮತ್ತು ಎಸ್‌ಟಿ ಸಮುದಾಯಕ್ಕೆ ಸೇರಿದ ಮೂವರು ಆರೋಪಿಗಳಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ಗಂಗಾವತಿ ತಾಲೂಕಿನ ಮರುಕುಂಬಿ ಗ್ರಾಮದಲ್ಲಿ ದಲಿತರಿಗೆ ಕ್ಷೌರದ ಅಂಗಡಿ ಹೋಟೆಲ್ ನಲ್ಲಿ ಪ್ರವೇಶ ಇರಲಿಲ್ಲ,ಇದನ್ನ ದಲಿತರು ಪ್ರಶ್ನಿಸಿದಾಗ 2014 ರಲ್ಲಿ ಸುವರ್ಣಿಯರು – ದಲಿತರ ನಡುವೆ ಜಗಳವಾಗಿ ದ್ವೇಷ ಬೆಳೆದಿತ್ತು. ಗ್ರಾಮದ ಮಂಜುನಾಥ್ ಎಂಬ ಸುವರ್ಣಿಯ ಸಮುದಾಯದ ವ್ಯಕ್ತಿ ಗಂಗಾವತಿ ಹೋಗಿದ್ದಾಗ ಆತನ ಮೇಲೆ ಹಲ್ಲೆಯಾಗಿತ್ತು. ಗ್ರಾಮದ ದಲಿತರೇ ಹಲ್ಲೆ ಮಾಡಿದ್ದಾರೆಂದು ಸುವರ್ಣಿಯರು ದಲಿತರ ಮೇಲೆ ದೌರ್ಜನ್ಯ ,ದಾಂಧಲೆ ನಡೆಸಿ ದಲಿತರ ಗುಡಿಸಲಿಗೆ ಬೆಂಕಿ ಹಾಕಿದ್ದರು
ಗುಡಿಸಲಿನಲ್ಲಿ ಯಾರು ಇಲ್ಲದ ಕಾರಣ ಪ್ರಾಣಹಾನಿಯಾಗಿರಲಿಲ್ಲ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ.ಹತ್ತು ವರ್ಷಗಳ ಬಳಿಕ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಗುರುವಾರ 98 ಆರೋಪಿಗಳಿಗೆ ಏಕಕಾಲಕ್ಕೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಹಲವು ಸಂತ್ರಸ್ತರ ಕುಟುಂಬ ಸದಸ್ಯರು ಕಳೆದ ಹತ್ತು ವರ್ಷಗಳಿಂದ ಈ ತೀರ್ಪಿಗಾಗಿ ಕಾಯುತ್ತಿದ್ದರು. ಸೋಮವಾರ ಒಟ್ಟು 101 ಆರೋಪಿಗಳನ್ನು ಬಂಧಿಸಲಾಗಿದ್ದು, ತೀರ್ಪನ್ನು ಅಕ್ಟೋಬರ್ 24ಕ್ಕೆ ಕಾಯ್ದಿರಿಸಲಾಗಿತ್ತು. 117 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, 101 ಮಂದಿಗೆ ಶಿಕ್ಷೆ ವಿಧಿಸಲಾಗಿದೆ ಉಳಿದ 16 ಆರೋಪಿಗಳು ಮೃತಪಟ್ಟಿದ್ದಾರೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
ಇನ್ನುಳಿದಂತೆ ಮೂವರು ಅಪರಾಧಿಗಳು ಎಸ್ಸಿ ಎಸ್ಟಿ ಸಮುದಾಯಕ್ಕೆ ಸೇರಿದ್ದರಿಂದ ಅವರಿಗೆ ಅಟ್ರಾಸಿಟಿ ಕಾಯ್ದೆ ಅನ್ವಯವಾಗಿಲ್ಲ. ಹೀಗಾಗಿ ಅವರಿಗೆ ಕೊಲೆ ಯತ್ನ, ದೊಂಬಿ ಸೇರಿದಂತೆ ಇನ್ನಿತರ ಸೆಕ್ಷನ್‌ನಲ್ಲಿ ಐದು ವರ್ಷ ಶಿಕ್ಷೆ ವಿಧಿಸಿದಾರೆ.