ವಿಜಯಪುರ ಹೋಬಳಿಯ ಬುಳ್ಳಹಳ್ಳಿ ಗ್ರಾಮದ ಶ್ರೀ ಅಭಯ ಆಂಜನೇಯ ಸ್ವಾಮಿಯವರ ಶಿಲಾ ಬಿಂಬ ಪ್ರತಿಷ್ಠಾಪನೆ, ವಿಮಾನ ಗೋಪುರ ಮಹಾಕಳಶ ಪ್ರತಿಷ್ಠಾಪನೆ ಹಾಗೂ ಕುಂಭಾಭಿಷೇಕ ಮಹೋತ್ಸವವು ಎರಡು ದಿನಗಳ ಕಾಲ ಭಕ್ತರ ಸಹಕಾರದಿಂದ ವಿಜೃಂಭಣೆಯಿಂದ ನಡೆಯಿತು.
ದೇವಾಲಯ ಅಭಿವೃದ್ಧಿ ಸಮಿತಿಯ ನಿರ್ದೇಶಕ ಬುಳ್ಳಹಳ್ಳಿ ರಾಜಪ್ಪ ಮಾತನಾಡಿ, ಇತಿಹಾಸವುಳ್ಳ ಪುರಾತನ ಕಾಲದ ಅಭಯ ಆಂಜಿನೇಯ ಸ್ವಾಮಿಯವರ ದೇವಾಲಯವು ಹಲವುವರ್ಷಗಳಿಂದ ಶಿಥಿಲಾವಸ್ಥೆಯಲ್ಲಿದ್ದರಿಂದ ದೇವಾಲಯ ನವೀಕರಣ ಮಾಡಲು ಗ್ರಾಮಸ್ಥರೆಲ್ಲಾ ಸಂಕಲ್ಪ ಮಾಡಿ ಇಂದು ಪೂರ್ಣಗೊಳಿಸಿದೆ.
ಗ್ರಾಮದ ಎಲ್ಲಾ ಸಮಾಜದ ಬಂಧುಗಳು ಸಹಕಾರ ನೀಡಿದ್ದಾರೆ ಮುತ್ತೈದೆಯರು ಪೂರ್ಣಕುಂಭ ಕಳಶಗಳನ್ನು ಹೊತ್ತು ವಿವಿಧ ಸಾಂಸ್ಕೃತಿಕ ಕಲಾತಂಡಗಳೊಂದಿಗೆ ಊರಿನ ಪ್ರಮುಖಬೀದಿಗಳಲ್ಲಿ ಸ್ವಾಮಿಯವರನ್ನು ಮೆರವಣಿಗೆ ಮಾಡಲಾಯಿತು.
ನವಗ್ರಹ ಪ್ರತಿಷ್ಠಾಪನೆ ಮಾಡಲಾಗಿದೆ ಹೋಮಹವನಗಳ ಮೂಲಕ ಎರಡು ದಿನ ಪೂಜಾ ಕೈಂಕರ್ಯಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.
ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ ಚನ್ನಕೃಷ್ಣಪ್ಪ, ಕಾರ್ಯದರ್ಶಿ ವೆಂಕಟೇಶ್,ಖಜಾಂಚಿ ಮುನಿಆಂಜಿನಪ್ಪ, ಮಹಾ ದಾನಿ ಸುನೀಲ್ ಆಂಜಿನಪ್ಪ, ಸದಸ್ಯರಾದ ಜಯಣ್ಣ, ಮಂಜುನಾಥ್, ದೇವರಾಜ್, ಶಾಮಣ್ಣ , ನಾರಾಯಣಸ್ವಾಮಿ, ವನಜಮ್ಮ ಮತ್ತಿತರು ಇದ್ದರು.