ದೇವನಹಳ್ಳಿ: ಜಿಲ್ಲಾ ಮತ್ತು ತಾಲ್ಲೂಕು ಕೃಷಿಕ ಸಮಾಜ ಕೇಂದ್ರ ಪುರಸ್ಕೃತ ಯೋಜನೆ ಮತ್ತು ಕೃಷಿ ಇಲಾಖೆ ವತಿಯಿಂದ ರಾಷ್ಟ್ರೀಯ ರೈತರ ದಿನಾಚರಣೆಯನ್ನು ಪಟ್ಟಣದ ದೇವರಾಜ್ ಅರಸ್ ಭವನದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು.
ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ರಾಜಣ್ಣ ಮಾತನಾಡಿ, ತಾಲ್ಲೂಕಿನಲ್ಲಿ ಶೇಖಡಾ 85 ರೈತಾಪಿ ಜನರೇ ಇರುವುದರಿಂದ ರೈತರಿಗೆ ದೊರೆಯುವಂತ ಸೌಲಭ್ಯಗಳು ಸರ್ಕಾರ ನೀಡಬೇಕು. ಬಯಲುಸೀಮೆ ಪ್ರದೇಶವಾದ್ದರಿಂದ 1200 ಅಡಿ ಬೊರ್ವೆಲ್ ಕೊರೆಸಿ ಕೃಷಿ ಮಾಡುತ್ತಿರುವ ರೈತರು ಇದ್ದಾರೆ, ಕೆ.ಸಿ.ವ್ಯಾಲಿ ಎನ್.ಸಿ ವ್ಯಾಲಿ ಬಾರದಿದ್ದರೇ ಜಮೀನುಗಳನ್ನು ಮಾರಿ ಗುಳೇ ಹೋಗುವ ಪರಿಸ್ಥಿತಿ ಉಂಟಾಗುತ್ತಿತ್ತು. ನಗರ ಪ್ರದೇಶಗಳಿಗೆ ಹೆಚ್ಚಾಗಿ ನಮ್ಮ ಭಾಗದಿಂದ ತರಕಾರಿ ಹೂ ಹಣ್ಣು ಬೆಳೆಗಳನ್ನು ನೀಡುತ್ತಿದೆ ರೇಷ್ಮೆ ಮತ್ತು ಹೈನುಗಾರಿಕೆ ರೈತರ ಮುಖ್ಯ ಕಸುಬಾಗಿದೆ ಎಂದು ತಿಳಿಸಿದರು.
ತಾಲ್ಲೂಕು ಕೃಷಿಕ ಸಮಾಜದ ನಿರ್ದೇಶಕ ಹೆಚ್.ಎಂ. ರವಿಕುಮಾರ್ ಮಾತನಾಡಿ, ದೇಶಕ್ಕೆ ಹಲವು ಪ್ರಧಾನಿಗಳು ಅಧಿಕಾರ ಮಾಡಿದ್ದಾರೆ ಆದರೆ ದೇಶದ 5 ನೇ ಪ್ರಧಾನಿ ಚೌದರಿ ಚರಣ್ ಸಿಂಗ್ ರವರು ರೈತರ ಪರವಾದ ಕೆಲಸ ಮಾಡಿದ್ದರಿಂದ ಅವರ ಜನ್ಮದಿನವನ್ನು ರಾಷ್ಟ್ರೀಯ ರೈತ ದಿನವನ್ನಾಗಿ ಸರ್ಕಾರ ಘೋಷಿಸಿತ್ತು. ರೈತರಿಗಾಗಿ ಹಲವಾರು ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದರು. ರೈತರು ಮತ್ತು ಅವರ ಸಮಸ್ಯೆಗಳ ಕುರಿತು ಅವರ ಪುಸ್ತಕಗಳು ದೇಶಾದ್ಯಂತ ರೈತರ ಜೀವನವನ್ನು ಸುಧಾರಿಸಲು ವಿವಿಧ ಪರಿಹಾರಗಳನ್ನು ಪ್ರಸ್ತುತಪಡಿಸಿದವು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ರವಿಕುಮಾರ್, ತಾಲ್ಲೂಕು ಅಧ್ಯಕ್ಷ ಶ್ರೀನಿವಾಸ್ ಗೌಡ, ಸದಸ್ಯರಾದ ಎಸ್.ಪಿ.ಮುನಿರಾಜು, ರಮೇಶ್, ದೇವರಾಜಪ್ಪ, ಮಾರೇಗೌಡ ಇನ್ನು ಹಲವು ಮುಖಂಡರು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ರೈತ ಬಾಂದವರು ಇದ್ದರು.