ಬೆಳಗಾವಿ: ತೆಲಂಗಾಣ ಮಾದರಿಯಲ್ಲಿ ರಾಜ್ಯದಲ್ಲಿಯೂ ಗೃಹ ರಕ್ಷಕರಿಗೆ 365 ದಿನಗಳ ಕಾಲ ಕೆಲಸ ನೀಡಬೇಕೆಂದು ಒತ್ತಾಯಿಸಿ,ಲೇಬರ್ ರೈಟ್ಸ್ ಫೋರಂ ರಾಜ್ಯಾಧ್ಯಕ್ಷ ಪಾವಗಡ ಶ್ರೀರಾಮ್ ನೇತೃತ್ವದಲ್ಲಿ ಬೆಳಗಾವಿ ನಗರದ ಸುವರ್ಣ ಗಾರ್ಡನ್ ನಲ್ಲಿ ಸಾವಿರಾರು ಸಿಬ್ಬಂದಿಗಳು ಹೋರಾಟ ನಡೆಸಿ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿದರು.
ನಮ್ಮ ಕರ್ನಾಟಕ ರಾಜ್ಯದಲ್ಲಿ 25,882 ಗೃಹ ರಕ್ಷಕರಿದ್ದು, ಅವರಲ್ಲಿ 21,327 ಪುರುಷರು ಮತ್ತು 4555 ಮಹಿಳಾ ಗ್ರಹ ರಕ್ಷಕರು, 426 ಘಟಕಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯ ಮತ್ತು ಹೊರರಾಜ್ಯ ಚುನಾವಣೆ ಕರ್ತವ್ಯ, ಕಾರ್ಯಕ್ರಮಗಳು, ರಾಷ್ಟ್ರೀಯ ಮತ್ತು ನಾಡ ಹಬ್ಬ, ಗಣಪತಿ ಹಬ್ಬ, ದಸರಾ ಮತ್ತು ಜಾತ್ರೆಗಳ ಬಂದೋಬಸ್ತ್ ಒಟ್ಟು ಸೇರಿ ವರ್ಷದಲ್ಲಿ ಮೂರು ತಿಂಗಳು ಮಾತ್ರ ಕರ್ತವ್ಯ ಸಿಗುತ್ತದೆ.
ಉಳಿದ ಒಂಬತ್ತು ತಿಂಗಳು ಗ್ರಹ ರಕ್ಷಕರ ಜೀವನ ಚಿಂತಾಜನಕವಾಗಿರುತ್ತದೆ ತಮ್ಮ ಅಳಲು ತೋಡಿಕೊಂಡರು. ಹೀಗೆ ಅತಂತ್ರ ಪರಿಸ್ಥಿತಿ ನಮ್ಮದಾಗಿದೆ.ಅಪೂರ್ಣ ಕೆಲಸದಿಂದ ಗೃಹ ರಕ್ಷಕರಿಗೆ ಮದುವೆಯಾಗಲು ಯಾರು ಹೆಣ್ಣುಕೊಡಲು ಮುಂದೆ ಬರುತ್ತಿಲ್ಲ
ಸಾವಿರಾರು ಗೃಹರಕ್ಷಕ ಮದುವೆಯಾಗದೆ ಉಳಿದಿದ್ದಾರೆ ಎಂದು ಗೋಳು ಹೊರಹಾಕಿದರು.ಎಂ.ಎ, ಎಲ್.ಎಲ್.ಬಿ, ಬಿ.ಎ, ಬಿ.ಎಡ್ ಹೀಗೆ ಆನೇಕ ಪದವಿಗಳನ್ನು ಪಡೆದವರು ಒಟ್ಟು ಐದು ಸಾವಿರಕ್ಕೂ ಹೆಚ್ಚು ಪದವೀಧರರು ಗೃಹರಕ್ಷಕ ಕರ್ತವ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೂ ಸರ್ಕಾರ ನಮ್ಮ ನೋವು ನಲಿವುಗಳನ್ನು ಕೇಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೇರೆ ಕೆಲಸ ಮಾಡಲು ಸಾಧ್ಯವಾಗದೆ ಈ ಕೆಲಸ ಬಿಡಲು ಮನಸ್ಸು, ಒಪ್ಪದೆ ಅವರ ಕುಟುಂಬಗಳು ಬೀದಿಗೆ ಬರುವ ಪರಿಸ್ಥಿತಿ ಇದೆ. ಆದ್ದರಿಂದ ನಮ್ಮ ಬೇಡಿಕೆ ಈಡೇರಿಕೆಗೆ ಸರ್ಕಾರ ಹಾಗೂ ಗೃಹ ಇಲಾಖೆಯ ಸಚಿವರು ಮುಂದಾಗಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.