ಕುರುಗೋಡು ಪಟ್ಟಣದ ತೃತೀಯ ಲಿಂಗಿ ರೇಣುಕಾ ಪೂಜಾರಿ ಬಳ್ಳಾರಿ ವಿಶ್ವವಿದ್ಯಾಲಯದ ಅರೆಕಾಲಿಕ ಪ್ರಾಧ್ಯಾಪಕಿಯಾಗಿ ನೇಮಕಗೊಳ್ಳುವ ಮೂಲಕ ಮಾದರಿಯಾಗಿದ್ದಾರೆ. ಮಂಗಳಮುಖಿಯೊಬ್ಬರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯಾಗಿರುವುದು ರಾಜ್ಯದಲ್ಲಿ ಇದೇ ಮೊದಲು

ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ ಕನ್ನಡ ಅಧ್ಯಾಪಕಿಯಾಗಿ ಸೇವೆ ರೇಣುಕಾ ಸಲ್ಲಿಸುತ್ತಿದ್ದಾರೆ. ಮಂಗಳಮುಖಿಯೊಬ್ಬರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯಾಗಿರುವುದು ರಾಜ್ಯದಲ್ಲಿ ಇದೇ ಮೊದಲು. ಶಿಕ್ಷಕರಾಗಿ ವಿವಿಧ ಶಾಲೆಗಳಲ್ಲಿ ಮೂವರು ಮಂಗಳಮುಖಿಯರು ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸುತ್ತಿದ್ದರಾದರೂ ಉನ್ನತ ಶಿಕ್ಷಣ ಪಡೆದು ಪ್ರಾಧ್ಯಾಪಕಿಯಾಗಿದ್ದು ಇದೇ ಪ್ರಥಮ.

ರೇಣುಕಾ ಪೂಜಾರಿ ಅವರು ಮೂಲತಃ ಬಳ್ಳಾರಿ ಜಿಲ್ಲೆ ಕುರುಗೋಡು ಪಟ್ಟಣದವರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಹುಟ್ಟೂರಿನಲ್ಲಿಯೇ ಪೂರ್ಣಗೊಳಿಸಿ, ಪದವಿ ಪೂರ್ವ ಶಿಕ್ಷಣವನ್ನು ಬಳ್ಳಾರಿಯ ಸರ್ಕಾರಿ ಪದವಿ ಪೂರ್ವ (ಮುನ್ಸಿಪಲ್) ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ.

ಪದವಿ ಶಿಕ್ಷಣವನ್ನು ಕುರುಗೋಡಿನಲ್ಲಿ ಹಾಗೂ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯಲ್ಲಿ ಅಭ್ಯಾಸ ಮಾಡಿದ್ದಾರೆ. ಉತ್ತಮ ಭವಿಷ್ಯ ರೂಪಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂಬ ಆಸೆಯನ್ನು ರೇಣುಕಾ ಹೊತ್ತಿದ್ದಾರೆ
