ಬಹು ಭಾಷಾ ನಟಿ ಅನುಷ್ಕಾ ಶೆಟ್ಟಿ ಈಗ ತಮ್ಮ ಹಿಂದಿನ ಅವತಾರದಲ್ಲಿ ಪ್ರೇಕ್ಷಕರ ಎದುರು ಬರಲು ಸಜ್ಜಾಗಿದ್ದಾರೆ. ಅನುಷ್ಕಾ ನಟನೆಯ ‘ಘಾಟಿ’ ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ಅನುಷ್ಕಾ ಲುಕ್ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.
ದಶಕಗಳ ಕಾಲ ಟಾಲಿವುಡ್ನ ಸ್ಟಾರ್ ನಟಿಯಾಗಿ ಮೆರೆದ ಅನುಷ್ಕಾ ಶೆಟ್ಟಿ, ‘ಬಾಹುಬಲಿ 2’ ಸಿನಿಮಾದ ಬಳಿಕ ಚಿತ್ರರಂಗದಿಂದ ಕೊಂಚ ದೂರ ಇದ್ದರು. 2017 ರಲ್ಲಿ ಬಿಡುಗಡೆ ಆದ ‘ಬಾಹುಬಲಿ 2’ ಸಿನಿಮಾದ ಬಳಿಕ ಅನುಷ್ಕಾ ನಟಿಸಿದ್ದು ಕೇವಲ ನಾಲ್ಕು ಸಿನಿಮಾಗಳಲ್ಲಿ. ಅದರಲ್ಲಿ ಒಂದು ಅತಿಥಿ ಪಾತ್ರ. ಆದರೆ ಈಗ ಮತ್ತೆ ಚಿತ್ರರಂಗದಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳಲು ಸಿದ್ಧವಾದಂತಿದೆ. ಅನುಷ್ಕಾ ಶೆಟ್ಟಿ ಈಗ ಒಮ್ಮೆಲೆ ಮೂರು ಸಿನಿಮಾಗಳಲ್ಲಿ ನಟಿಸುತ್ತಿದ್ದು, ಅದರಲ್ಲಿ ಒಂದು ಸಿನಿಮಾದ ಪೋಸ್ಟರ್ ಬಿಡುಗಡೆ ಆಗಿದ್ದು, ಮತ್ತೆ ಹಳೆ ಅನುಷ್ಕಾರನ್ನು ನೆನಪಿಸುವಂತಿದೆ.
‘ಅರುಂಧತಿ’, ‘ಭಾಗಮತಿ’, ‘ರುದ್ರಮ್ಮದೇವಿ’ ಅಂಥಹಾ ಪವರ್ಫುಲ್ ಪಾತ್ರಗಳಲ್ಲಿ ನಟಿಸಿದ್ದ ಅನುಷ್ಕಾ ಶೆಟ್ಟಿ ಈಗ ಮತ್ತೊಮ್ಮೆ ಅಂಥಹುದೇ ಪವರ್ಫುಲ್ ಪಾತ್ರದ ಮೂಲಕ ಪ್ರೇಕ್ಷಕರ ಎದುರು ಬರಲು ಅಣಿಯಾಗಿದ್ದಾರೆ. ಅವರು ‘ಘಾಟಿ’ ಹೆಸರಿನ ಸಿನಿಮಾದಲ್ಲಿ ನಟಿಸುತ್ತಿದ್ದು, ಸಿನಿಮಾದಲ್ಲಿನ ಅನುಷ್ಕಾ ಲುಕ್ ಪೋಸ್ಟರ್ ಇದೀಗ ಬಿಡುಗಡೆ ಆಗಿದೆ. ರಕ್ತ ಮೆತ್ತಿದ ಕೈಗಳಲ್ಲಿ ಚುಟ್ಟಾ ಹಿಡಿದು ಸೇದುತ್ತಾ, ಬಿರುಗಣ್ಣುಗಳಲ್ಲಿ ದಿಟ್ಟಿಸುತ್ತಿರುವ ಅನುಷ್ಕಾರ ಚಿತ್ರ, ಅವರ ಅರುಂಧತಿ, ಭಾಗಮತಿಯ ಪಾತ್ರಗಳನ್ನು ನೆನಪಿಗೆ ತರುತ್ತಿದೆ.
‘ಘಾಟಿ’ ಸಿನಿಮಾವನ್ನು ಖ್ಯಾತ ನಿರ್ದೇಶಕ ಕ್ರಿಶ್ ನಿರ್ದೇಶನ ಮಾಡಲಿದ್ದಾರೆ. ಈ ಹಿಂದೆ ಕ್ರಿಶ್ ನಿರ್ದೇಶನ ಮಾಡಿದ್ದ ಐಕಾನಿಕ್ ಸಿನಿಮಾ ‘ವೇದಂ’ನಲ್ಲಿ ಅನುಷ್ಕಾ ಶೆಟ್ಟಿ ವೇಶ್ಯೆಯ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾ 2010 ರಲ್ಲಿ ಬಿಡುಗಡೆ ಆಗಿತ್ತು. ಈಗ 14 ವರ್ಷಗಳ ನಂತರ ಕ್ರಿಶ್ ನಿರ್ದೇಶನದ ಹೊಸ ಸಿನಿಮಾದಲ್ಲಿ ಅನುಷ್ಕಾ ಶೆಟ್ಟಿ ನಟಿಸುತ್ತಿದ್ದಾರೆ. ‘ಸಂತ್ರಸ್ತೆ, ಅಪರಾಧಿ, ದಂತಕತೆ’ ಎಂಬ ಅಡಿಬರಹ ‘ಘಾಟಿ’ ಸಿನಿಮಾಕ್ಕೆ ಇದ್ದು, ಅನ್ಯಾಯಕ್ಕೊಳಗಾಗಿ ಆ ನಂತರ ಸೇಡು ತೀರಿಸಿಕೊಂಡು, ಹೆಸರಾಗಿ ಉಳಿಯುವ ಪಾತ್ರ ಇದಾಗಿರಬಹುದು ಎಂಬ ಊಹೆಯನ್ನು ಇದರಿಂದ ಮಾಡಬಹುದು.
ಅನುಷ್ಕಾ ಶೆಟ್ಟಿಯ ಲುಕ್ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ. ‘ಕ್ವೀನ್ ಈಸ್ ಬ್ಯಾಕ್’, ‘ಮಾಸ್ ಓವರ್ಲೋಡೆಡ್’, ‘ಸ್ವೀಟಿ ಈಸ್ ಬ್ಯಾಕ್ ಆಸ್ ಘಾಟಿ’, ‘ಸ್ವೀಟಿ ಇನ್ ಮಾಸ್ ಅವತಾರ್’, ‘ಇಂಟೆನ್ಸ್’, ‘ಇಂಟ್ರೆಸ್ಟಿಂಗ್’ ಇನ್ನೂ ಹಲವು ರೀತಿಯ ಕಮೆಂಟ್ ಗಳನ್ನು ಮಾಡಿದ್ದಾರೆ. ‘ಘಾಟಿ’ ಸಿನಿಮಾವನ್ನು ಕ್ರಿಶ್ ನಿರ್ದೇಶನ ಮಾಡಿದ್ದರೆ, ನಿರ್ಮಾಣ ಮಾಡುತ್ತಿರುವುದು ಪ್ರಭಾಸ್ ಸಹಭಾಗಿತ್ವದ ಯುವಿ ಕ್ರಿಯೇಶನ್ಸ್
ಅನುಷ್ಕಾ ಶೆಟ್ಟಿ ‘ಘಾಟಿ’ ಸಿನಿಮಾದ ಜೊತೆಗೆ ಮಲಯಾಳಂನ ‘ಕತನಾರ್’ ಸಿನಿಮಾದಲ್ಲಿಯೂ ನಟಿಸಿದ್ದಾರೆ. ‘ಕತನಾರ್’ ಸಿನಿಮಾದಲ್ಲಿ ಭೂತದ ಪಾತ್ರದಲ್ಲಿ ಅನುಷ್ಕಾ ಶೆಟ್ಟಿ ನಟಿಸಿದ್ದು, ಅಲ್ಲಿಯೂ ಸಹ ಅವರಿಗೆ ಸಖತ್ ಪವರ್ಫುಲ್ ಪಾತ್ರ ದೊರೆತಿದೆ. ಇದರ ನಡುವೆ ತೆಲುಗಿನ ಮತ್ತೊಂದು ಹಾಸ್ಯ ಸಿನಿಮಾವನ್ನು ಸಹ ಅನುಷ್ಕಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ.