ಅತ್ಯಾಚಾರ, ಜಾತಿ ನಿಂದನೆ, ಗುತ್ತಿಗೆದಾರನಿಗೆ ಬೆದರಿಕೆ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಮತ್ತಷ್ಟು ಸ್ಫೋಟಕ ವಿಚಾರಗಳು ಇದೀಗ ಬಯಲಾಗಿವೆ. ಮುನಿರತ್ನ ವಿರುದ್ಧ ಅತ್ಯಾಚಾರ ಆರೋಪ ಮಾಡಿರುವ ಸಂತ್ರಸ್ತೆ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದು, ಮಾಜಿ ಸಿಎಂ ಒಬ್ಬರ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿಯೇ ಮುನಿರತ್ನ ಸಚಿವ ಸ್ಥಾನ ದಕ್ಕಿಸಿಕೊಂಡಿದ್ದರು ಎಂದು ದೂರಿದ್ದಾರೆ. ವಿವರ ಇಲ್ಲಿದೆ.
ಬೆಂಗಳೂರು, ಅಕ್ಟೋಬರ್ 9: ಅತ್ಯಾಚಾರ ಪ್ರಕರಣ ಎದುರಿಸುತ್ತಿರುವ ಬಿಜೆಪಿ ಶಾಸಕ ಮುನಿರತ್ನ ವಿರುದ್ಧ ಸಂತ್ರಸ್ತೆ ಮತ್ತಷ್ಟು ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಬೆಂಗಳೂರಿನ ರಾಜಭವನ ರಸ್ತೆಯ ಖಾಸಗಿ ಹೋಟೆಲ್ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮುನಿರತ್ನ ಮಾಜಿ ಮುಖ್ಯಮಂತ್ರಿಗಳೊಬ್ಬರನ್ನು ಹನಿಟ್ರ್ಯಾಪ್ ಮಾಡಿಸಿದ್ದಾರೆ. ಮುನಿರತ್ನ ಬಳಿ ಮಾಜಿ ಮುಖ್ಯಮಂತ್ರಿಗಳ ವಿಡಿಯೋ ಇದೆ. ‘ಆ ವಿಡಿಯೋ ತೋರಿಸಿ’ ಬ್ಲ್ಯಾಕ್ಮೇಲ್ ಮಾಡಿಯೇ ಮುನಿರತ್ನ ಮಂತ್ರಿ ಸ್ಥಾನ ಪಡೆದುಕೊಂಡಿದ್ದರು. ಅವರ ಕೃತ್ಯಗಳನ್ನು ಸಹಿಸಲಾರದೆ ದೂರು ದಾಖಲಿಸಿದ್ದೇವೆ ಎಂದಿದ್ದಾರೆ.
2020ರಲ್ಲಿ ಬಿಜೆಪಿ ಶಾಸಕ ಮುನಿರತ್ನ ಪರಿಚಯವಾಗಿದ್ದಾರೆ. ಮಮತಾ, ವೆಂಕಟೇಶ್ ಎಂಬುವರ ಮೂಲಕ ಪರಿಚಯವಾಗಿದ್ದರು. ಶಾಸಕ ಮುನಿರತ್ನ ನನಗೆ ವಿಡಿಯೋ ಕರೆ ಕೂಡ ಮಾಡಿದ್ದಾರೆ. ಒಂದು ದಿನ ಗೋದಾಮಿನ ಬಳಿ ಕರೆದುಕೊಂಡು ಹೋಗಿದ್ದರು. ಅಲ್ಲಿ ನನ್ನನ್ನು ಹೆದರಿಸಿ ಅತ್ಯಾಚಾರ ಮಾಡಿದ್ದಾರೆ. ಅವರು ಜಾಮೀನು ಪಡೆದು ಬಂದ ಮೇಲೆ ನನಗೆ ಜೀವ ಭಯ ಇದೆ ಎಂದು ಸಂತ್ರಸ್ತೆ ಹೇಳಿದ್ದಾರೆ.
ಬಿಟ್ಟುಬಿಡಿ ಎಂದು ಗೋಗರೆದರೂ ಬಿಡದೆ ಅತ್ಯಾಚಾರ: ಆರೋಪ
ಸದ್ಯ ಪ್ರಕರಣದ ತನಿಖೆಗೆ ಎಸ್ಐಟಿ ರಚನೆ ಆಗಿದೆ. ಹಾಗಾಗಿ ಪ್ರತಿ ದಿನ ಮಹಜರಿಗೆ ಹೋಗಬೇಕು. ಎಸ್ಐಟಿ ಮುನಿರತ್ನರನ್ನು ಗೋಪ್ಯವಾಗಿ ಕರೆದುಕೊಂಡು ಹೋಗುತ್ತಿದ್ದಾರೆ. ಒಂದು ದಿನ ಗೋಡೌನ್ ಬಳಿ ಕರೆದಿದ್ದ ಮುನಿರತ್ನ ನನ್ನನ್ನು ಎರಡನೇ ಮಹಡಿಗೆ ಕರೆದುಕೊಂಡು ಹೋಗಿದ್ದರು. ತಬ್ಬಿಕೊಳ್ಳಲು ಬಂದಿದ್ದರು, ಆಗ ದೂರ ತಳ್ಳಿದ್ದೆ. ನೀವು ತಂದೆ ಸಮಾನ ಸರ್, ಬಿಟ್ಟುಬಿಡಿ ಎಂದು ಹೇಳಿದ್ದೆ. ಆಗ ದಿವಾನ್ ಕಾಟ್ ಮೇಲೆ ಕೂರಿಸಿದ್ದರು. ನನ್ನನ್ನು ಎಂಎಲ್ಎ ಆಗಿ ನೋಡುತ್ತಿದ್ದೀಯಾ, ನಾನೊಬ್ಬ ಕಾಂಟ್ರಾಕ್ಟರ್ ಎಂದು ಹೇಳಿದ್ದರು. ಅಲ್ಲದೇ ನನ್ನನ್ನ ಹೆದರಿಸಿ ದಿವಾನ್ ಕಾಟ್ ಮೇಲೆಯೇ ಅತ್ಯಾಚಾರ ಎಸಗಿದ್ದರು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಮುನಿರತ್ನ ಜಾಮೀನು ಪಡೆದು ಹೊರ ಬಂದರೆ ನನಗೆ ಜೀವ ಭಯ ಇದೆ ಎಂದೂ ಸಂತ್ರಸ್ತೆ ಹೇಳಿದ್ದಾರೆ.
ಇದನ್ನೂ ಓದಿ: ಮುನಿರತ್ನ ಬಳಿ ಇದೆ ಹಲವರ ಖಾಸಗಿ ವಿಡಿಯೋ, ಎದುರಾಳಿಗಳ ಹಣಿಯಲು ಬಳಕೆ: ದೂರಿನಲ್ಲಿ ಉಲ್ಲೇಖ
ಮುನಿರತ್ನ ನಾಯ್ಡು ಬಳಿ ಹಲವರ ಖಾಸಗಿ ಅಶ್ಲೀಲ ವಿಡಿಯೋಗಳಿವೆ. ಅದನ್ನು ಇಟ್ಟುಕೊಂಡು ಅವರು ರಾಜಕೀಯ ಎದುರಾಳಿಗಳನ್ನು ಹಣಿಯುತ್ತಿದ್ದರು. ಜತೆಗೆ, ರಾಜಕೀಯ ಎದುರಾಳಿಗಳನ್ನು ಮಣಿಸಲು ಮುನಿರತ್ನ ಹನಿಟ್ರ್ಯಾಪ್ ಷಡ್ಯಂತ್ರ ಹೂಡುತ್ತಿದ್ದರು ಎಂದು ಸಂತ್ರಸ್ತೆ ಈಗಾಗಲೇ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದೀಗ ಮಾಜಿ ಮುಖ್ಯಮಂತ್ರಿಗಳೊಬ್ಬರನ್ನು ಹನಿಟ್ರ್ಯಾಪ್ ಮಾಡಿರುವ ಆರೋಪ ಮಾಡಿದ್ದು, ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸುವ ಸಾಧ್ಯತೆ ಇದೆ.